ಪೆಲಿಕನ್ -
ಪೆಲಿಕಾನಿಫಾರ್ಮೀಸ್ ಗಣದ ಪೆಲಿಕಾನಿಡೀ ಕುಟುಂಬಕ್ಕೆ ಸೇರಿದ ಪಕ್ಷಿ. ಇದರ ವೈಜ್ಞಾನಿಕ ಹೆಸರು ಪೆಲಿಕಾನಸ್. ಇದರಲ್ಲಿ 6 ಪ್ರಭೇದಗಳುಂಟು. ಇವುಗಳ ಪೈಕಿ ನಾಲ್ಕು ಪ್ರಭೇದಗಳು ದಕ್ಷಿಣ ಯೂರೋಪ್, ಆಫ್ರಿಕ, ದಕ್ಷಿಣ ಏಷ್ಯ, ಆಸ್ಟ್ರೇಲಿಯಗಳಲ್ಲಿ ಕಂಡುಬರುವುದಾದರೆ ಉಳಿದವೆರಡು ಉತ್ತರ ಹಾಗೂ ದಕ್ಷಿಣ ಅಮೆರಿಕಗಳಲ್ಲಿ ವಾಸಿಸುವುವು. ಇದಲ್ಲದೆ, ಫಾಸಿಲ್ ರೂಪದಲ್ಲಿ (ಆಲಿಗೋಸೀನ್ ನಿಕ್ಷೇಪಗಳಲ್ಲಿ) 10 ಪ್ರಭೇದಗಳು ಪರಿಚಿತವಾಗಿವೆ. ಫಾಸಿಲ್ ರೂಪದವೂ ಜೀವಂತ ಪೆಲಿಕನ್ ಪ್ರಭೇದಗಳು ದೇಹರಚನೆಯಲ್ಲಿ ಒಂದು ತೆರನಾಗಿವೆಯಾಗಿ ಎಲ್ಲ ಪ್ರಭೇದಗಳನ್ನೂ ಪೆಲಿಕಾನಸ್ ಜಾತಿಗೇ ಸೇರಿಸಲಾಗಿದೆ. ಇಂದು ಕಾಣದೊರೆಯುತ್ತಿರುವ ಪ್ರಭೇದಗಳ ಅವಶೇಷಗಳು ಪ್ಲೀಸ್ಟೋಸೀನ್ ನಿಕ್ಷೇಪಗಳಲ್ಲೂ ಸಿಕ್ಕಿವೆ ಎಂಬ ಅಂಶ ಕುತೂಹಲಕಾರಿ. ಪೆಲಿಕನ್ ಹಕ್ಕಿಗಳು ಅಲಿಗೋಸೀನ್ ಅವಧಿಯಿಂದ ತೊಡಗಿ ಇಂದಿನ ತನಕವೂ ಬದಲಾಗದೇ ಉಳಿದುಬಂದಿವೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ. 

ಪೆಲಿಕನ್ ದೊಡ್ಡ ಗಾತ್ರದ ಹಕ್ಕಿ. ಅಮೆರಿಕದಲ್ಲಿ ಕಾಣದೊರೆಯುವ ಬಿಳಿ ಪೆಲಿಕನ್ ಹಕ್ಕಿಯ ರೆಕ್ಕೆ ಹಲವು ಮೂರು ಮೀಟರಿಗೂ ಹೆಚ್ಚು ಇದೆಯಾದರೆ ಕಂದು ಪೆಲಿಕನ್ನಿನ ರೆಕ್ಕೆಗಳು ಎರಡು ಮೀಟರ್ ಅಗಲಕ್ಕೆ ಹರಡಬಲ್ಲವು. ದೇಹದ ಬಣ್ಣ ಕಂದು ಇಲ್ಲವೆ ಬಿಳಿ. ರೆಕ್ಕೆಯಂಚುಗಳು ಕಪ್ಪು. ದೇಹದ ಮೇಲೆ ನಸುಗೆಂಪು ಅಥವಾ ಬೂದು ಬಣ್ಣದ ಕಲೆಗಳಿರುವುದುಂಟು. ಪೆಲಿಕನ್ ಹಕ್ಕಿಯ ಅತ್ಯಂತ ಮುಖ್ಯ ಹಾಗೂ ವಿಚಿತ್ರ ಲಕ್ಷಣವೆಂದರೆ ಇದರ ಉದ್ದ ಕೊಕ್ಕಿನ ತಳಭಾಗಕ್ಕೂ ಕೊರಳಿಗೂ ಸೇರಿದಂತೆ ಅಂಟಿಕೊಂಡಿರುವ ಬೃಹದ್ ಗಾತ್ರದ ಚೀಲ (ಗುಲಾರ್ ಪೌಚ್). ಇದು ಸುಮಾರು 3 ಗ್ಯಾಲನ್ ನೀರನ್ನು ಹಿಡಿಯುವಷ್ಟು (ಹಕ್ಕಿಯ ಜಠರದ 3-4 ಪಟ್ಟು ಹೆಚ್ಚು) ದೊಡ್ಡದಾಗಿದೆ. ಹಕ್ಕಿ ಇದನ್ನು ತನ್ನ ಆಹಾರವಾದ ಮೀನನ್ನು ಹಿಡಿಯುವ ಬಲೆಯಾಗಿ ಬಳಸುತ್ತದೆ. ಬಹುಶಃ ದೇಹವನ್ನು ತಂಪಾಗಿರಿಸುವ ವಿಶೇಷ ಸಾಧನವಾಗಿಯೂ ಇದು ಉಪಯುಕ್ತ. 

ಪೆಲಿಕನ್ ನೀರಹಕ್ಕಿ. ಅಮೆರಿಕದಲ್ಲಿ ಕಾಣಸಿಗುವ ಕಂದು ಪೆಲಿಕನ್ ದಕ್ಷಿಣ ಅಟ್ಲಾಂಟಿಕ್ ಹಾಗೂ ಪೆಸಿಫಿಕ್ ಸಾಗರಗಳ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತದೆ. ಉಳಿದ ಪ್ರಭೇದಗಳು ದೊಡ್ಡ ಕೆರೆಗಳ ಬಳಿ, ಸರೋವರಗಳ ಬಳಿ ವಾಸಿಸುತ್ತವೆ. ನೀರಲ್ಲಿ ಈಜಲು ಸಹಾಯಕವಾಗುವಂತೆ ಕಾಲುಗಳ ಬೆರಳುಗಳೆಲ್ಲ ಚರ್ಮದ ಪಟಲದಿಂದ ಒಂದುಗೂಡಿವೆ.

ರೆಕ್ಕೆಗಳ ವಿಸ್ತಾರ ಹರವಿನೊಂದಿಗೆ ಪೆಲಿಕನ್ ಹಕ್ಕಿಗಳ ಎಲುಬುಗಳಲ್ಲೂ ಚರ್ಮದಡಿಯಲ್ಲೂ ವಾಯುಕೋಶಗಳ ಜಾಲವೇ ಇದ್ದು ದೇಹವನ್ನು ಹಗುರಗೊಳಿಸುವಲ್ಲಿ ಸಹಾಯಕವಾಗಿವೆ. ಆದರೂ, ಪೆಲಿಕನ್ ಹಾರಲು ಪಕ್ರಮಿಸುವಾಗ ಕಷ್ಟಪಡುತ್ತದೆ. ಗಾಳಿ ಅನುಕೂಲವಾಗಿದ್ದರೆ ಸರಿ, ಇಲ್ಲದಿದ್ದರೆ ನೀರ ಹಾಳೆಯ ಗುಂಟ- ಸೊಟ್ಟ ಸೊಟ್ಟವಾಗಿ ಅರ್ಧ ಹಾರಿದಂತೆ ಅರ್ಧ ಎಳೆದಂತೆ ಕೊಂಚ ದೂರ ಸಾಗಿ ಅನಂತರ ಗಾಳಿಗೇರುತ್ತದೆ. ಹೀಗೆ ಒಮ್ಮೆ ಏರಿದ ತರುವಾಯ ತುಂಬ ಬಲಯುತವಾಗಿ, ಗಂಭೀರ ಗತಿಯಲ್ಲಿ ಹರತೊಡಗುವುದು. ಹಾರುವಾಗ ನೂರಾರು ಪೆಲಿಕನುಗಳು ಗಿ- ಆಕಾರದ ಸಾಲಿನಲ್ಲೂ ಹಾರದ ಆಕಾರದಲ್ಲೂ ಒಂದರ ಹಿಂದೆ ನಿರ್ದಿಷ್ಟ ಅಂತರದಲ್ಲಿ ಒಂದೇ ಲಯದಲ್ಲಿ ರೆಕ್ಕೆಗಳನ್ನು ಬಡಿಯುತ್ತ ಸಾಗುವುವು. 

ಪೆಲಿಕನ್ ಸಂಘಜೀವಿ. ನೂರಾರು ಹಕ್ಕಿಗಳು ಒಂದೇ ಪ್ರದೇಶದ ಮರ ಪೊದೆ ಇಲ್ಲವೇ ನೆಲದ ಮೇಲೆ ಕಸ ಕಡ್ಡಿ ಸೇರಿಸಿ ಗೂಡು ಕಟ್ಟುತ್ತವೆ. ಮೀನು ಹಿಡಿಯುವಾಗಲೂ ಗುಂಪು ಗುಂಪಾಗಿಯೇ ಇರುತ್ತವೆ. ಹಲವಾರು ಹಕ್ಕಿಗಳು, ಅರ್ಧ ಚಂದ್ರಾಕೃತಿಯಲ್ಲಿ ಸಾಲುಗಟ್ಟಿ ನೀರ ಮೇಲೆ ಈಜುತ್ತ ಮೀನುಗಳನ್ನು ಕೊಳದ ಅಂಚಿನೆಡೆಗೆ ಅಟ್ಟುತ್ತವೆ. ಅನಂತರ ಒಮ್ಮೆಲೆ ಪ್ರತಿಯೊಂದು ಹಕ್ಕಿಯೂ ಮೀನುಗಳ ಮೇಲೆ ಎರಗಿ ಕೊಕ್ಕಿನ ಚೀಲದಲ್ಲಿ ಸೆರೆ ಹಿಡಿಯುತ್ತದೆ. 

ಪೆಲಿಕನುಗಳು 1-4 ಮೊಟ್ಟೆಗಳನ್ನಿಡುತ್ತವೆ. ಗಂಡು ಹೆಣ್ಣುಗಳೆರಡೂ 4-5 ವಾರಗಳ ಕಾಲ ಕಾವು ಕೊಟ್ಟು ಮರಿ ಮಾಡುತ್ತವೆ. ಹುಟ್ಟಿದಾಗ ಬಲು ಅಸಹಾಯಕ ಸ್ಥಿತಿಯಲ್ಲಿರುವ ಮರಿಗಳು 2 ತಿಂಗಳ ತರುವಾಯ ಹರುವ ತಾಕತ್ತು ಗಳಿಸುತ್ತವೆ. ಮೂರು ವರ್ಷಗಳಲ್ಲಿ ಸಂಪೂರ್ಣ ಪ್ರೌಢ ಸ್ಥಿತಿಗೆ ಬರುತ್ತವೆ. ಇವುಗಳ ಆಯಸ್ಸು ಸುಮಾರು 30 ವರ್ಷಗಳೆನ್ನಲಾಗಿದೆ. ಪೆಲಿಕನ್ನುಗಳಿಗೆ ದೊಡ್ಡ ಮೊತ್ತದಲ್ಲಿ ಆಹಾರ ಬೇಕು. ಒಂದು ವಯಸ್ಕ ಹಕ್ಕಿ ದಿನವೊಂದಕ್ಕೆ 2 ಕೆ.ಜಿ. ಆಹಾರ ಸೇವಿಸುವುದು. 
ಭಾರತದಲ್ಲಿ ಕಾಣಸಿಗುವ ಪೆಲಿಕನ್ ಪ್ರಭೇದ. ಪೆಲಿಕಾನಸ್ ಫಿಲಿಪೆನ್ಸಿಸ್ ಎಂಬುದು ಕರ್ನಾಟಕದಲ್ಲಿ ಇದುವರೆಗೆ ಪತ್ತೆ ಹಚ್ಚಲಾಗಿರುವ ಇದರ ಆವಾಸ ಸ್ಥಾನ. ಮದ್ದೂರಿನ ಬಳಿಯ ಕೊಕ್ಕರೆ ಬೆಳ್ಳೂರು. ಇದನ್ನು ಪ್ರಮುಖ ಪಕ್ಷಿತಾಣವೆಂದು ಘೋಷಿಸಲಾಗಿದೆ.

(ನೋಡಿ : ಕೊಕ್ಕರೆ ಬೆಳ್ಳೂರು) (ನೋಡಿ : ಪ್ರಮುಖ ಪಕ್ಷಿ ತಾಣಗಳು)
										(ಎಂ.ಎನ್.ವಿಐ.)
								(ಪರಿಸ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ